ಇತ್ತೀಚೆಗೆ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ. ಬ್ಯಾಂಕ್ ಗಳ ಹೆಸರಿನಲ್ಲಿ ಜನರ ಖಾತೆಗೆ ಕನ್ನ ಹಾಕುತ್ತಿದ್ದಾರೆ ಸೈಬರ್ ವಂಚಕರು. ಇತ್ತ ರಿವಾರ್ಡ್ ಸಿಗುತ್ತದೆ, ಹಣ ಸಿಗುತ್ತದೆ ಎಂದು ಜನ ಕೂಡ ಬಕ್ರಾ ಆಗ್ತಿದ್ದಾರೆ. ವಾಟ್ಸಾಪ್ ಮೂಲಕವೂ ಲಿಂಕ್ ಕಳಿಸುವ ಖದೀಮರ ಬಲೆಗೆ ಬೀಳುತ್ತಿರುವ ಜನರು, ರಿವಾರ್ಡ್ ಆಸೆಗೆ ಲಿಂಕ್ ಕ್ಲಿಕ್ ಮಾಡುತ್ತಿದ್ದಾರೆ. ಲಿಂಕ್ ಕ್ಲಿಕ್ ಮಾಡಿ ತಮ್ಮ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಅದರಲ್ಲೂ ಬ್ಯಾಂಕ್ ಗಳ ಹೆಸರಿನಲ್ಲೇ ವಂಚನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಕೆನರಾ ಬ್ಯಾಂಕ್ ಹಾಗೂ SBI ಬ್ಯಾಂಕ್ ಬಹುಮಾನದ ಹೆಸರಿನಲ್ಲಿ ಸೈಬರ್ ಫ್ರಾಡ್ ನಡೆಯುತ್ತಿದೆ. ದೀಪಾವಳಿ ಆಫರ್ ಹೆಸರಿನಲ್ಲೂ ಲಿಂಕ್ ಕಳುಹಿಸಿ, ಎನಿ ಡೆಸ್ಕ್ ಸಾಫ್ಟ್ ವೇರ್ ಬಳಸಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಲಪಟಾಯಿಸುತ್ತಿದ್ದಾರೆ. ಆ್ಯಪ್ ವಂಚನೆ ಸಂಬಂಧ ಪ್ರತಿನಿತ್ಯ 40ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಪ್ರಕರಣ ದಾಖಲಾದ್ರೂ ಆರೋಪಿಗಳ ಪತ್ತೆಯೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.