ಟೋಕಿಯೋ: ಎಲ್ಲರೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಸತ್ತ ಮೇಲೆ ಏನಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಮನುಷ್ಯ ಸತ್ತ ಬಳಿಕ ಬದುಕು ಹೇಗಿರಲಿದೆ ಅನ್ನೋದನ್ನು ತಿಳಿಯೋ ಕುತೂಹಲ ಎಲ್ಲರಿಗೂ ಇರುತ್ತೆ. ಆದರೆ ಇಲ್ಲೊಂದು ಕೆಫೆ ಇದೆ ಇಲ್ಲಿ ಬದುಕಿದ್ದಾಗಲೇ ಸಾವಿನ ಅನುಭವವನ್ನು ಪಡೆಯಬಹುದು.
ಹೌದು ಸಾವಿನ ಬಗ್ಗೆ ಅನುಭವ ನೀಡೋ ಕೆಫೆ ಒಂದು ಜಪಾನ್ ನಲ್ಲಿದೆ. ಜಪಾನಿನ ಫುಟ್ಸು ಅನ್ನೋ ಪುಟ್ಟ ನಗರದಲ್ಲಿ ಈ ವಿಶಿಷ್ಠ ಕೆಫೆ ಇದೆ. ಕಾಫಿನ್ ಕೆಫೆ ಅಂತಲೇ ಫೇಮಸ್ ಆಗಿರೋ ಈ ಕೆಫೆ ಜನರು ಭೇಟಿ ಕೊಟ್ಟು ಶವಪೆಟ್ಟಿಗೆಯಲ್ಲಿ ಮಲಗಿ ಜೀವನ ವಿಶಿಷ್ಠ ಅನುಭವ ಪಡೆಯಬಹುದಂತೆ. ಹೌದು ಇಲ್ಲಿ ಚಿನ್ನದ ಬಣ್ಣ, ಹಸಿರು ಬಣ್ಣ ಮತ್ತು ಹಳದಿ ಬಣ್ಣದ ಶವಪೆಟ್ಟಿಗೆಗಳಿವೆ. ಈ ಶವಪೆಟ್ಟಿಗೆಗಳನ್ನು ನಿಜವಾದ ಶವಪೆಟ್ಟಿಗೆಯಂತೆಯೇ ಅಲಂಕಾರ ಸಹ ಮಾಡಲಾಗಿದೆ.

ಇನ್ನು ಈ ಕೆಫೆಗೆ ಬರುವವರು ಶವಪೆಟ್ಟಿಗೆಯಲ್ಲಿ ಮಲಗಿ ವಿಶ್ರಾಂತಿ ಪಡೆಯಬಹುದು. ಶವಪೆಟ್ಟಿಗೆಯಲ್ಲಿ ಗಾಢ ಅಂಧಕಾರದಲ್ಲಿ ಮಲಗಿ ಮೇಲೆದ್ದು ಬರುವ ಜನರು ಹೊಸ ಅನುಭೂತಿ ಪಡೆದಿರೋದಾಗಿ ಹೇಳಿ ಕೊಂಡಿದಾರೆ.
ಈ ಕಾಫಿನ್ ಕೆಫೆ ಆರಂಭಿಸಿರೋ ಕಿಯೋಟಕ ಹಿರಾನೊ ಶವಪೆಟ್ಟಿಗೆಯಿಂದ ಹೊರಬರುವುದು ಎಂದರೆ ನೀವು ಮರುಜನ್ಮ ಪಡೆದಿದ್ದೀರಿ ಮತ್ತು ನಿಮ್ಮ ಜೀವನವನ್ನು ಮರುಹೊಂದಿಸಿದ್ದೀರಿ ಎಂದರ್ಥ. ಜನರು ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಬಹುದು ಎಂದು ಭಾವಿಸಬೇಕು. ಜನರು ಬದುಕಲು ಸೀಮಿತ ಸಮಯವಿದೆ ಎಂದು ಹೇಳಿದಾಗ ಜನರು ಅದರ ಬಗ್ಗೆ ಯೋಚಿಸಬಹುದು, ಆದರೆ ದೈನಂದಿನ ಜೀವನದಲ್ಲಿ ಸಾವಿನ ಬಗ್ಗೆ ಯೋಚಿಸುವುದು ಕಷ್ಟ. ಶವಪೆಟ್ಟಿಗೆಯ ಕಪ್ಪು ಕತ್ತಲೆಯಲ್ಲಿ, ಒಬ್ಬರು ತಮ್ಮ ಉಳಿದ ಜೀವನ ಮತ್ತು ಪ್ರೀತಿಪಾತ್ರರ ಅಂತಿಮ ದಿನಗಳ ಬಗ್ಗೆ ಯೋಚಿಸಬಹುದು ಅಂತಾರೆ.
ಈ ಕಾಫಿನ್ ಕೆಫೆಯಲ್ಲಿ ಶವಪೆಟ್ಟಿಗೆಯಲ್ಲಿ ಮಲಗಿದ ಅನುಭವ ಪಡೆಯೋದಕ್ಕೆ 2200 ಯೆನ್ ಅಂದರೆ ಸುಮಾರು 2000 ರೂ. ಕೊಡಬೇಕು. ಜನ ರಿಸರ್ವೇಷನ್ ಮಾಡಿ ಇಲ್ಲಿ ಬಂದು ಶವಪೆಟ್ಟಿಗೆಯಲ್ಲಿ ಮಲಗುತ್ತಿದಾರೆ. ಅದರಲ್ಲೂ ಶವಪೆಟ್ಟಿಗೆಯಲ್ಲಿ ಮಲಗಿ ಸಾವಿನ ಅನುಭವ ಪಡೆಯುತ್ತಿರುವವರಲ್ಲಿ ಯುವ ಸಮೂಹವೇ ಹೆಚ್ಚಂತೆ.
ಜಪಾನ್‌ನಂತೆ ಬ್ಯಾಂಕಾಕ್ ನಲ್ಲೂ ಕೆಫೆಯೊಂದರಲ್ಲಿ ಶವಪೆಟ್ಟಿಗೆ ಇಡಲಾಗಿದೆ. ಅಲ್ಲಿಯೂ ಸಹ ಕೆಫೆಗೆ ಬರೋ ಗ್ರಾಹಕರು ಈ ಶವಪೆಟ್ಟಿಗೆಯಲ್ಲಿ ಸ್ವಲ್ಪ ಹೊತ್ತು ಮಲಗಿ ಸಾವಿನ ಅನುಭವ ಪಡೆಯಬಹುದು. ಇನ್ನು ಶವಪೆಟ್ಟಿಗೆಯಲ್ಲಿ ಮಲಗಿದವರಿಗೆ ಕೆಫೆಯಲ್ಲಿ ಡಿಸ್ಕೌಂಟ್ ಸಹ ಸಿಗುತ್ತಂತೆ.