ಸ್ಪೆಷಲ್ ಸ್ಟೋರಿ

ಮಂಜುನಾಥನ ದರ್ಶನ ಮತ್ತಷ್ಟು ಸುಲಭ.. ತಿರುಪತಿ ವ್ಯವಸ್ಥೆ ಜಾರಿ..!

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ತಿರುಪತಿ ಮಾದರಿಯಲ್ಲಿ ಧರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಕ್ಯೂ ಕಾಂಪ್ಲೆಕ್ಸ್‌ ವ್ಯವಸ್ಥೆ ಮಾಡಲಾಗಿದ್ದು, ಮಂಜುನಾಥ ಸ್ವಾಮಿಯ ದರ್ಶನ ಮತ್ತಷ್ಟು ಸುಲಭ ಆಗಿದೆ.

ಇನ್ಮುಂದೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮತ್ತಷ್ಟು ಸುಲಭ ಆಗಿದೆ. ದೇವಸ್ಥಾನ ಆಡಳಿತ ಮಂಡಳಿ ಭಕ್ತರಿಗೆ ಗುಡ್‌ನ್ಯೂಸ್‌ ನೀಡಿದೆ. ದೇವರ ದರ್ಶನಕ್ಕಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುವುದನ್ನ ತಪ್ಪಿಸಲು ಮುಂದಾಗಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿರುವ ಹೈಟೆಕ್‌ ವ್ಯವಸ್ಥೆ ಇದೀಗ ಧರ್ಮಸ್ಥಳದಲ್ಲಿಯೂ ಭಕ್ತರಿಗಾಗಿ ಸಿಗಲಿದೆ.

ಹೌದು, ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ಮಂದಿ ಬರ್ತಾರೆ. ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆ ದರ್ಶನಕ್ಕೆ ತೆರಳುವ ದಾರಿಯಲ್ಲಿವಿಶ್ರಾಂತಿ ಕೊಠಡಿಗಳಲ್ಲಿ ಗಂಟಗಟ್ಟಲೆ ಕಾದು ದೇವರ ದರ್ಶನ ಪಡೆಯುತ್ತಾರೆ. ಇದಕ್ಕೆಂದೆ ಪ್ರತ್ಯೇಕ ಕೊಠಡಿಗಳು, ಮೂಲ ಸೌಕರ್ಯ, ಊಟ, ತಿಂಡಿ ಹೀಗೆ ಎಲ್ಲ ವ್ಯವಸ್ಥೆ ಅಲ್ಲಿದೆ. ಇದೇ ರೀತಿಯ ಹೈಟೆಕ್‌ ವ್ಯವಸ್ಥೆ ರಾಜ್ಯದ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲೂ ಕಲ್ಪಿಸಲಾಗಿದೆ. ಸ್ವಾಮಿಯ ದರ್ಶನಕ್ಕೆ ಬರುವ ಅಪಾರ ಸಂಖ್ಯೆಯ ಭಕ್ತಗಣಕ್ಕೆ ಹೊಸ ರೀತಿಯ ಕ್ಯೂ ಕಾಂಪ್ಲೆಕ್ಸ್‌ ಸಿಸ್ಟಮ್‌ ವ್ಯವಸ್ಥೆ ಮಾಡಲಾಗಿದೆ. ತಾಸುಗಟ್ಟೆಲೆ ಸರತಿ ಸಾಲಿನಲ್ಲಿ ನಿಂತು ಜನರು ದೇವರ ದರ್ಶನ ಪಡೆಯುವ ಹರಸಾಹಸಕ್ಕೆ ಬ್ರೇಕ್‌ ಬೀಳಲಿದೆ.

ತಿರುಪತಿ ಮಾದರಿಯಲ್ಲಿ ಮಂಜುನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ʼಶ್ರೀ ಸಾನಿಧ್ಯʼ ಹೆಸರಿನಲ್ಲಿ ಹೊಸ ಸಂಕೀರ್ಣವನ್ನು ನಿರ್ಮಿಸಲಾಗಿದೆ. 2 ಅಂತಸ್ತಿನ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಒಟ್ಟು 16 ವಿಶಾಲ ಭವನಗಳಿವೆ, ಆಧುನಿಕ ತಂತ್ರಜ್ಞಾನದೊಂದಿಗೆ ಭಕ್ತರಿಗೆ ಎಲ್ಲ ಸೌಲಭ್ಯ ನೀಡಲಾಗಿದೆ. ಪ್ರತಿ ರೂಮ್‌ನಲ್ಲಿಯೂ ಏಕಕಾಲದಲ್ಲಿ 600 ರಿಂದ 800 ಜನರು ವಿಶ್ರಾಂತಿ ಪಡೆಯಬಹುದಾಗಿದೆ. ಭಕ್ತರು ಆರಾಮಾಗಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಸ್ಟೇನ್ಲೆಸ್ ಸ್ಟೀಲ್ ಕುರ್ಚಿಗಳಿವೆ. ಎಸಿ ಕೂಡ ಇದ್ದು, ಭಕ್ತರ ಸಂಖ್ಯೆಯನ್ನು ನಿರ್ಧರಿಸಿ ಭವನದೊಳಗೆ ಕಳುಹಿಸಲು AI ಟೆಕ್ನಾಲಜಿ ಆಧಾರಿತ ಕ್ಯಾಮೆರಾ ಅಳವಡಿಸಲಾಗಿದೆ. ಡಿಜಿಟಲ್ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದ್ದು, ರೂಮ್‌ಗಳ ಸಂಖ್ಯೆ, ದರ್ಶನದ ಅವಧಿ, ದೇವಸ್ಥಾನದ ಇತಿಹಾಸ ನಿರಂತರವಾಗಿ ಡಿಪ್ಲೇ ಆಗ್ತಿರುತ್ತದೆ. ಪ್ರತಿ ಕೊಠಡಿಯಲ್ಲಿಯೂ ಕ್ಯಾಂಟೀನ್, ಕುಡಿಯುವ ನೀರಿನ ವ್ಯವಸ್ಥೆ, ಟಾಯ್ಲೆಟ್‌ ವ್ಯವಸ್ಥೆ ಮಾತ್ರವಲ್ಲದೇ ಮಕ್ಕಳ ಆರೈಕೆ ಕೊಠಡಿ ಇದೆ. ವಿಶಾಲವಾದ ಭವನದಲ್ಲಿ ವಿಶ್ರಾಂತಿ ಪಡೆಯುತ್ತಲೇ ದೇವರ ದರ್ಶನ ಪಡೆಯಬಹುದು.

ಧರ್ಮಸ್ಥಳದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಕ್ಯೂ ಕಾಂಪ್ಲೆಕ್ಸ್‌ನಿಂದ  4-5 ಗಂಟೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಜಸ್ಟ್‌ ಒಂದೂವರೆ ಗಂಟೆಯೊಳಗೆ ಮಂಜುನಾಥ ಸ್ವಾಮಿ ದರ್ಶನ ಪಡೆಯಬಹುದಾಗಿದೆ. ಇನ್ಮುಂದೆ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದರ್ಶನಕ್ಕೆ ಗಂಟೆಗಟ್ಟಲೇ ಕಾಯಬೇಕಿಲ್ಲ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ತಿರುಪತಿ ಮಾದರಿಯಲ್ಲಿ ಧರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಕ್ಯೂ ಕಾಂಪ್ಲೆಕ್ಸ್‌ ವ್ಯವಸ್ಥೆ ಮಾಡಲಾಗಿದ್ದು, ಮಂಜುನಾಥ ಸ್ವಾಮಿಯ ದರ್ಶನ ಮತ್ತಷ್ಟು ಸುಲಭ ಆಗಿದೆ.