ಬೆಂಗಳೂರು : ವೃತ್ತಿಯ ಜತೆ ಹವ್ಯಾಸವನ್ನು ಬೆಳೆಸಿಕೊಳ್ಳೋದು ಅಷ್ಟು ಸುಲಭವಲ್ಲ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಸಂಗೀತ ಹಾಗೂ ಸಾಹಿತ್ಯದಲ್ಲಿ ಸಾಧನೆ ಮಾಡೋದು ಎಂದರೆ ದೊಡ್ಡ ಸಾಹಸವೇ ಸರಿ. ಆದರೆ ಇಲ್ಲೊಬ್ಬರು ಹೆಡ್ ಕಾನ್ಸ್ಟೇಬಲ್ ವೃತ್ತಿಯ ಜೊತೆ ಹವ್ಯಾಸವನ್ನೂ ಬೆಳಸಿ, ಪೋಷಿಸಿದ್ದಾರೆ. ಅವರ ಹೆಸರೇ ಮೌಲಾಲಿ ಕೆ ಅಲಗೂರ. ಮೌಲಾಲಿ ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು.

2012 ರಲ್ಲಿ ಸಿಎಆರ್ ಪೊಲೀಸ್ ಎಕ್ಸಾಂ ಬರೆದು ಪಾಸಾಗಿದ್ದ ಮೌಲಾಲಿ ಕನ್ನಡದ ಹುಚ್ಚಭಿಮಾನಿ ಅಂದ್ರೆ ತಪ್ಪಾಗಲಾರದು. ಇದೀಗ ಮೌಲಾಲಿ ಆಡುಗೋಡಿಯ ಸಿಎಆರ್ ಕಚೇರಿಯ ಡಾಗ್ ಸ್ಕ್ವಾಡ್ ನಲ್ಲಿ ಕೆಲಸವನ್ನ ನಿರ್ವಹಿಸ್ತಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಸಾಕಷ್ಟು ಜ್ಞಾನವಿರುವ ಮೌಲಾಲಿ ಇದೀಗ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮೇರುಪ್ರತಿಭೆಯಾಗಿ ಕಾಣಿಸಿಕೊಳ್ತಿದ್ದಾರೆ.
ಹತ್ತಾರು ಕವನ ಸಂಕಲನ ಮೌಲಾಲಿಯವರ ಹಿರಿಮೆ..!
ಪೊಲೀಸ್ ಕೆಲಸದ ಜತೆ ಸಾಹಿತ್ಯದ ರಸಸ್ವಾದವನ್ನ ಹಂಚುತ್ತಿರುವ ಮೌಲಾಲಿ ಈಗಾಗಲೇ ಹತ್ತಾರು ಕವನ ಸಂಕಲನವನ್ನ ಬಿಡುಗಡೆ ಮಾಡಿದ್ದಾರೆ. ನಾಕಂಡ ಜಯ, ಆಗಸದ ತೇಜ ಆರೂಢ ಮಹಾರಾಜ, ಭಾವ ಸ್ಪಂದನ, ನಾವು ಭಾರತೀಯರು, ನಲುಗದಿರಲಿ ಪರಿಸರ,ಪ್ರೀತಿಯ ಸುಳಿಯಲ್ಲಿ ಹೀಗೆ ಹತ್ತು ಹಲವು ಸಾಹಿತ್ಯ ಸಂಕಲನವನ್ನ ಬಿಡುಗಡೆ ಮಾಡಿದ್ದಾರೆ. ಇನ್ನು ಸಾಹಿತ್ಯದ ಹೂರಣದ ಜತೆ ಸಂಗೀತದ ಇಂಪನ್ನ ಕೂಡ ತನ್ನೊಳಗೆ ಬಚ್ಚಿಟ್ಟಿರುವ ಮೌಲಾಲಿ ಸಾಕಷ್ಟು ಹಾಡುಗಳನ್ನ ಕೂಡ ಹಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಂಗೊಳ್ಳಿ ರಾಯಣ್ಣ, ಸಂಚಾರಿ ನಿಯಮ ಪಾಲಸಿ, ಜೈ ಭೀಮ್ ಅಂಬೇಡ್ಕರ್ ಹೆಸರಿನ ಸಾಂಗ್ ಗಳನ್ನ ಕೂಡ ಹಾಡಿ ಹಿರಿಯ ಅಧಿಕಾರಿಗಳಿಂದ ಬೇಷ್ ಅನ್ನಿಸಿಕೊಂಡಿದ್ದಾರೆ.
ಖಾಕಿ ತೊಟ್ಟರೆ ಬೇರೆ ಯಾವ ಕೆಲಸಕ್ಕೂ ಟೈಂ ಸಿಗಲ್ಲ ಅನ್ನೋ ಮಾತಿಗೆ ಮೌಲಾಲಿ ತದ್ವಿರುದ್ಧ. ತನ್ನ ನಿಷ್ಠೆಯ ಕೆಲಸದ ಜತೆ ಅಷ್ಟೇ ಪ್ರೀತಿಯ ಸಾಹಿತ್ಯದ ತೊಟ್ಟಿಲನ್ನ ಮನಸಾರೇ ತೂಗ್ತಿರೋ ಮೌಲಾಲಿಯವರ ಕೆಲಸ ನಿಜಕ್ಕೂ ಗ್ರೇಟ್.