ವಿದೇಶ

ಅಣ್ವಸ್ತ್ರ ದಾಳಿ ಎದುರಿಸಲು ಸಿದ್ಧರಾಗಿ.. ಜನತೆಗೆ ಯುರೋಪ್‌ ರಾಷ್ಟ್ರಗಳ ಸೂಚನೆ

ಮೂರನೇ ಮಹಾಯುದ್ಧ, ಅಣ್ವಸ್ತ್ರ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಯುರೋಪಿನ ಕೆಲವೊಂದು ರಾಷ್ಟ್ರಗಳು ಜನರಿಗೆ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಿ, ಆಹಾರ, ನೀರು ಸಂಗ್ರಹಿಸಿ ಎಂದು ಸೂಚನೆ ಕೊಟ್ಟಿವೆ.

ಸ್ಟಾಕ್‌ಹೋಂ: ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಹೊಸ ಆಯಾಮ ಪಡೆದುಕೊಳ್ಳುವ ಸೂಚನೆಗಳು ಕಾಣುತ್ತಿವೆ. ಮೂರನೇ ಮಹಾಯುದ್ಧ, ಅಣ್ವಸ್ತ್ರ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಯುರೋಪಿನ ಕೆಲವೊಂದು ರಾಷ್ಟ್ರಗಳು ಜನರಿಗೆ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಿ, ಆಹಾರ, ನೀರು ಸಂಗ್ರಹಿಸಿ ಎಂದು ಸೂಚನೆ ಕೊಟ್ಟಿವೆ.

ಅಮೆರಿಕದ ಕ್ಷಿಪಣಿಗಳನ್ನು ರಷ್ಯಾ ವಿರುದ್ಧ ಬಳಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅನುಮತಿ ಕೊಟ್ಟಿದ್ದರು. ಅನುಮತಿ ಸಿಕ್ಕ ಬೆನ್ನಲ್ಲೇ ಉಕ್ರೇನ್‌ ಸೇನೆ ರಷ್ಯಾದ ಮೇಲೆ 6 ಕ್ಷಿಪಣಿಗಳನ್ನು ಉಡಾಯಿಸಿತ್ತು. ಇನ್ನು ಬೈಡನ್‌ ದಾಳಕ್ಕೆ ಪ್ರತಿ ದಾಳ ಉರುಳಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸಹ ತಮ್ಮ ರಾಷ್ಟ್ರದ ಅಣ್ವಸ್ತ್ರ ದಾಳಿಯ ನೀತಿಯಲ್ಲಿ ಬದಲಾವಣೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಷ್ಯಾ ಈಗ ಉಕ್ರೇನ್‌ ಮೇಲೆ ಅಣ್ವಸ್ತ್ರ ದಾಳಿ ನಡೆಸಬಹುದಾಗಿದೆ.

ಪುಟಿನ್‌ ಅಣ್ವಸ್ತ್ರ ದಾಳಿಯ ನೀತಿಯಲ್ಲಿ ಬದಲಾವಣೆ ತರುತ್ತಿದ್ದಂತೆ ಯುರೋಪಿನಲ್ಲಿರುವ ನ್ಯಾಟೋ ರಾಷ್ಟ್ರಗಳಿಗೆ ಭೀತಿ ಶುರುವಾಗಿದೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಅಮೆರಿಕದ ಜತೆಯಲ್ಲೇ ನ್ಯಾಟೋ ರಾಷ್ಟ್ರಗಳೂ ಬೆಂಬಲ ನೀಡುತ್ತಿವೆ. ಹಾಗಾಗಿ ರಷ್ಯಾ ಉಕ್ರೇನ್‌ ಮೇಲೆ ಅಣ್ವಸ್ತ್ರ ದಾಳಿ ನಡೆಸಿದರೆ ಅಥವಾ ಯುದ್ಧವನ್ನು ತೀವ್ರಗೊಳಿಸಿದರೆ ನ್ಯಾಟೋ ರಾಷ್ಟ್ರಗಳ ಮೇಲೆ ದಾಳಿ ನಡೆಯುವ ಸಂಬಂಧ ಇದೆ. ಈ ಹಿನ್ನೆಲೆಯಲ್ಲಿ ಯುದ್ಧ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರುವಂತೆ ಫಿನ್ಲೆಂಡ್‌, ಸ್ವೀಡನ್, ಡೆನ್ಮಾರ್ಕ್‌‌ ಮತ್ತು ನಾರ್ವೆ ದೇಶಗಳು ತಮ್ಮ ನಾಗರಿಕರಿಗೆ ಸೂಚನೆ ನೀಡಿವೆ.

ಇನ್ನು ಯುದ್ಧ ಆರಂಭವಾದರೆ ಅಥವಾ ಅಣ್ವಸ್ತ್ರ ದಾಳಿ ನಡೆದರೆ ನಾಗರಿಕರು ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಲ್ಕೈದು ದಿನ ಬದುಕುಳಿಯಲು ಹೇಗೆ ಸಿದ್ಧತೆ ನಡೆಸಬೇಕು ಎಂದು ಪಾಂಪ್ಲೆಟ್‌ಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಜತೆಗೆ ಪ್ರತಿಯೊಬ್ಬರಿಗೂ ಇ ಮೇಲ್‌ ಮೂಲಕ ಸೂಚನೆಗಳನ್ನು ಕಳುಹಿಸಲಾಗುತ್ತಿದೆ.

ಸ್ವೀಡನ್‌ ಸರ್ಕಾರ ಜನರಿಗೆ ಆಲೂಗಡ್ಡೆ, ಕೋಸು, ಕ್ಯಾರೆಟ್‌, ಮೊಟ್ಟೆ, ಬೊಲೊಗ್ನೀಸ್ ಸಾಸ್, ಬ್ಲೂಬೆರ್ರಿ ಮತ್ತು ರೋಸ್‌ಶಿಪ್ ಸೂಪ್ ಸೇರಿದಂತೆ ಒಣ ಆಹಾರ ಪದಾರ್ಥಗಳು ಹಾಗೂ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚನೆ ಕೊಟ್ಟಿದೆ.

ಎರಡನೇ ಮಹಾಯುದ್ಧದ ಬಳಿಕ ಸ್ವೀಡನ್‌ ಕೇವಲ 5 ಬಾರಿ ಮಾತ್ರ ಇಂತಹ ಸೂಚನೆಯನ್ನು ಜನರಿಗೆ ನೀಡಿತ್ತು. ಈಗ ಮೂರನೇ ಮಹಾಯುದ್ಧದ ಕಾರ್ಮೋಡದ ನಡುವೆ ಜನರಿಗೆ ಯುದ್ಧ ಎದುರಿಸಲು ಸಿದ್ಧರಾಗಿ ಎಂಬ ಸೂಚನೆ ಸಿಕ್ಕಿದೆ.

ಬೈಡನ್‌ ಸೂಚನೆ ಬಳಿಕ ನ್ಯಾಟೋ ಕೂಟದಲ್ಲಿರುವ 32 ದೇಶಗಳಲ್ಲಿ ಯುದ್ಧದ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ದೇಶಗಳು ಯುದ್ಧಕ್ಕೆ ಸಿದ್ಧತೆ ನಡೆಸುತ್ತಿವೆ. ಫಿನ್ಲೆಂಡ್‌ ದೇಶ ರಷ್ಯಾದೊಂದಿಗೆ 1300 ಕಿ.ಮೀ. ಉದ್ದದ ಗಡಿಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಫಿನ್ಲೆಂಡ್‌ ಸಾಕಷ್ಟು ನಷ್ಟ ಅನುಭವಿಸಿತ್ತು. ಹಾಗಾಗಿ ಈ ಬಾರಿ ಮೊದಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ.

ಇನ್ನು ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದ ಬಳಿಕ 2023 ರಲ್ಲಿ ಫಿನ್ಲೆಂಡ್‌ ದೇಶ ನ್ಯಾಟೋಗೆ ಸೇರಿದ್ದರೆ 2024 ರಲ್ಲಿ ಸ್ವೀಡನ್‌ ನ್ಯಾಟೋಗೆ ಸೇರಿತ್ತು. ಉಕ್ರೇನ್‌ ಸಹ ನ್ಯಾಟೋಗೆ ಸೇರಲು ಬಯಸುತ್ತಿದೆ. ಆದರೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ್ಯಾಟೋ ಸೇರ್ಪಡೆ ಸಾಧ್ಯವಿಲ್ಲ.

ರಷ್ಯಾ ಜಗತ್ತಿನಲ್ಲೇ ಅತೀ ಹೆಚ್ಚು ಅಣ್ವಸ್ತ್ರ ಸಿಡಿತಲೆ ಹೊಂದಿರುವ ರಾಷ್ಟ್ರಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತೆ. ಇನ್ನು ರಷ್ಯಾ ಅಣ್ವಸ್ತ್ರ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದಿದ್ದು ಸಾಕಷ್ಟು ಅಸ್ತ್ರಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದೆ. ಆದರೆ ಸೋವಿಯತ್‌ ಒಕ್ಕೂಟದಿಂದ ಬೇರ್ಪಟ್ಟ ಬಳಿಕ ಉಕ್ರೇನ್‌ ಬಳಿ ಭಾರಿ ಪ್ರಮಾಣದ ಅಣ್ವಸ್ತ್ರ ಸಿಡಿತಲೆಗಳಿದ್ದವು. ಆದರೆ 1994 ಅಣ್ವಸ್ತ್ರಗಳನ್ನು ರಷ್ಯಾಗೆ ಹಸ್ತಾಂತರಿಸಿ ಅಣ್ವಸ್ತ್ರ ರಹಿತ ದೇಶವಾಗಿ ಉಳಿಯಲು ಉಕ್ರೇನ್‌ ಒಪ್ಪಂದಕ್ಕೆ ಸಹಿ ಹಾಕಿತ್ತು. ಹಾಗಾಗಿ ಉಕ್ರೇನ್‌ ಬಳಿ ಪ್ರಸ್ತುತ ಯಾವುದೇ ಅಣ್ವಸ್ತ್ರಗಳಿಲ್ಲ. ಆದರೆ ಅಣ್ವಸ್ತ್ರ  ಹೊಂದಿರುವ ಹಲವು ದೇಶಗಳು ಉಕ್ರೇನ್‌ ಬೆಂಬಲಕ್ಕೆ ನಿಂತಿವೆ.

ಈ ಹಿನ್ನೆಲೆಯಲ್ಲಿ ರಷ್ಯಾದ ಹೊಸ ಅಣ್ವಸ್ತ್ರ ದಾಳಿ ನೀತಿಯಂತೆ ಯಾವುದೇ ಒಂದು ಅಣ್ವಸ್ತ್ರ ರಹಿತ ದೇಶ ಅಣ್ವಸ್ತ್ರ ಹೊಂದಿರುವ ದೇಶದ ಬೆಂಬಲದೊಂದಿಗೆ ತನ್ನ ದೇಶದ ಮೇಲೆ ದಾಳಿ ಮಾಡಿದರೆ. ಆ ದೇಶದ ಮೇಲೆ ಅಣ್ವಸ್ತ್ರ ದಾಳಿ ಮಾಡಬಹುದಾಗಿದೆ. ಅಂದರೆ ಅಮೆರಿಕ ಬೆಂಬಲದೊಂದಿಗೆ ಉಕ್ರೇನ್‌ ಸೇನೆ ರಷ್ಯಾ ಮೇಲೆ ದಾಳಿ ಮಾಡಿದರೆ ರಷ್ಯಾ ಅಣ್ವಸ್ತ್ರ ದಾಳಿ ಮಾಡಬಹುದಾಗಿದೆ.

ಈ ಮೊದಲು ಅಣ್ವಸ್ತ್ರ ಹೊಂದಿಲ್ಲದ ದೇಶದ ಮೇಲೆ ಅಣ್ವಸ್ತ್ರ ದಾಳಿ ಮಾಡುವಂತಿಲ್ಲ ಎಂಬ ನೀತಿಯನ್ನು ರಷ್ಯಾ ಹೊಂದಿತ್ತು. ಆದರೆ ಈಗ ಅದಕ್ಕೆ ಬದಲಾವಣೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಮೂರನೇ ಮಹಾಯುದ್ಧದ ಕಾರ್ಮೋಡ ಯುರೋಪನ್ನ ಆವರಿಸಿದೆ.